ಮಂಗಳವಾರ, ಜನವರಿ 30, 2024

ಅನಂತ ಸೇತು

 ಕಾಲದ ಅನಂತತೆಯ ಅಳೆದವವರ್‍ಯಾರು

ಕಾಲದ ದಾರಿಯ ಮೈಲುಗಲ್ಲುಗಳು ನಾವುಗಳು


ಹಿಂದೆ ಬಂದವರಿಗೆ ನಾವು ದಾರಿ

ಮುಂದೆ‌ ಬರುವವರಿಗೆ ಅವರು ದಾರಿ


ಹಿಂದೆನವರು ಮುಂದಿನವರಿಗೆ‌ ಹಿಂದೆ

ಮುಂದಿನವರು ಹಿಂದಿನವರಿಗೆ ಮುಂದೆ


ಹಿಂದೆಯೋ‌ ಮುಂದೆಯೋ

ಒಟ್ಟಿನಲ್ಲಿ‌ ಮುಂದಿನ ದಾರಿ ಶ್ರಮಿಸುವವರು ಮಾತ್ರ

ಹಿಂದಿನವರು‌ ಮುಂದಿನವರು


ಸಾಗುವ ದಾರಿಯಲ್ಲಿ‌ ಪಯಣಿಗರು ಹಲವರು


ಅದರಲ್ಲಿ‌ ಒಂದು ನೀನು

ಮತ್ತೊಂದು ನಾನು


ನಾನು ಎಂದರೆ ನಾನಲ್ಲ 

ನೀನು ಎಂದರೆ ನಿನಲ್ಲ


ನಾನು ಮತ್ತು ನೀನು ಹೀಗೆ ಎಲ್ಲರೂ

ನಾನು ನೀನು ಆನು ತಾನು...


ನಾನು ಎನ್ನುವ ಭ್ರಮೆ

ನೀನು ಎನ್ನುವ ಮಾಯೆ

ಎರಡೂ ಸತ್ಯವಾಗಿರುವ ಮಿತ್ಯಗಳು

ಕಾಲದ ಅನಂತತೆಯ ಸಂಕೇತಗಳು


ಕಾಲದ ದಾರಿಯಲ್ಲಿ ನೀನು ಮತ್ತೊಂದು ಮೈಲಿಗಲ್ಲು

ಅದು ಹಸಿರಾಗಿರಲಿ‌‌ ಹೊಚ್ಚ ಹೊಸದಾಗಿರಲಿ

ನಿರಂತರವಾಗಿರಲಿ

ಗುರುವಾರ, ಫೆಬ್ರವರಿ 23, 2023

ಅರಿವು

Image
 

ಮೊದಲು ತಿಳಿದಿದ್ದೆ ಶಕ್ತಿಬೇಕು
ನಿಜವ ಅರಿಯಲು..
ವಾಸ್ತವ ನೋಡಲು

ಅಂದು ಎಣಿಸಿದ್ದೆ ಯುಕ್ತಿಬೇಕು
ಜಗವ ಮೆಚ್ಚಲು
ಸುಖವ ಗಳಿಸಲು

ಇಂದು ಕಂಡೆನು ಉಚಿತವೆಲ್ಲವೂ
ಜಗವು ಕಣ್ಣೆದಿರು
ಸುಖವು ದಿನಹರಿವು

ಈಗ ತಿಳಿದೆನು ಶಕ್ತಿಬೇಕು
ನಿಜವ ಒಪ್ಪಲು
ವಾಸ್ತವ ಭರಿಸಲು

ಶಕ್ತಿಯಿಲ್ಲದೆ ಜ್ಞಾನ ಗಳಿಸಿರೆ
ಯುಕ್ತಿಯ ಬಂಧವು
ಮುಕ್ತಿಯ ಪಾಶವು

ಮುಂದೆಂದೂ ಹಿಂತಿರುಗಲಾರೆನು
ಅಜ್ಞಾನದ ಮುಗ್ಧತೆಗೆ
ಅಸತ್ಯದ ಭರವಸೆಗೆ


ತಿಳಿದಾಯಿತು
ಅರಿತಾಯಿತು
ಮುಂದೊಡಲು ಶಕ್ತಿ ಗಳಿಸಬೇಕಷ್ಟೇ!

ಮಂಗಳವಾರ, ಅಕ್ಟೋಬರ್ 1, 2019

ತತ್ತ್ವಮಸಿ

Image

 
 
ತತ್ತ್ವಮಸಿ ವಾಕ್ಯವನು ಅರ್ಥಯಿಸಬೇಕಿದೆ
ನನ್ನೊಳಗೆ ನನ್ನನ್ನು ಹುಡುಕಾಡಬೇಕಿದೆ
ನಾನೇ ಜಗವೆಂದು ಮನಗಾಣಬೇಕಿದೆ 
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಕಣ್ಣ ನಾ ಬಿಗಿಹಿಡಿಯೆ ಎಲ್ಲೆಲ್ಲೂ ಬೆಳಕಿಲ್ಲ 
ಕಿವಿಯ ನಾ ಮುಚ್ಚಿರಲು ನಾದದಾ ಮೊಳಗಿಲ್ಲ
ನಾಸಿಕವ ಬಿಗಿಹಿಡಿಯೆ ಜಗದಿ ಪರಿಮಳವಿಲ್ಲ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ನನ್ನ ಕಲ್ಪನೆಯ ನರಕ, ನನ್ನ ಕಲ್ಪನೆಯ ನಾಕ
ನಾನೆಂಬ ಕಲ್ಪನೆಯ ಫಲದಿಂದಲೇ ಲೋಕ
ನಾನಿಲ್ಲವಾದರೆ ಇರಬಹುದೇ ಈ ಲೋಕ 
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಎಲ್ಲವೂ ನನ್ನ ಮಾಯೆ, ಕೋಪವೇತಕೆ ಮನವೆ 
ಎಲ್ಲರೂ ನನ್ನ ಛಾಯೆ, ತಾಪವೇತಕೆ ತನುವೆ 
ನನ್ನನ್ನು ಬೇರ್ಪಡಿಸಿ ಹುಡುಕುವುದು ತರವೆ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ನಾ ಜನಿಸೆ ಜಗದುದಯ, ನಾ ಮಡಿಯೆ ಜಗದ ಲಯ
ನನ್ನಿಂದ ಜಗದ ನಡೆ ನಾನಲ್ಲವೇ ಜಗದೊಡೆಯ
ಅರಿತ ಮರುಕ್ಷಣದಿಂದ ಬದುಕು ಆನಂದಮಯ
ತತ್ತ್ವಮಸಿ ತತ್ ತ್ವಮಸಿ ತತ್ ತ್ವಂ ಅಸಿ ತತ್ತ್ವಂ ಅಸಿ

ಗುರುವಾರ, ಏಪ್ರಿಲ್ 11, 2019

ಭಾವರಂದ್ರ

Image


ನಕ್ಷತ್ರಗಳು ಮಿನುಗುತ್ತಿವೆ
ತನ್ನ ಸುತ್ತ ಜೀವ ತುಂಬಿಸಿ

ಹಲವು ಭೂಮಿಗಳು ನಲಿದಿವೆ
ನೂರು ನೆನಪುಗಳ ಕೂಡಿಸಿ

ತಾರೆಗಳಿಗೂ ಮುಪ್ಪಾವರಿಸಿದೆ
ನಲಿವುಗಳು ನೆನಪುಗಳಾಗಿವೆ

ಸಣ್ಣ ತಾರೆಗದು ಸಿಡಿಯುವ ಚಕ್ರ
ದೊಡ್ಡ ನಕ್ಷತ್ರವಿನ್ನು ಕಪ್ಪು ರಂದ್ರ

ಕಪ್ಪುರಂದ್ರವದು ಬಹು ಸಾಂದ್ರ
ಭಾವನೆಗಳೂ ಹೊರನುಸುಳವಿನ್ನು

ಕಪ್ಪು ಗೋರಿಗಳು ಜಗಕೆ ನಿರ್ಜೀವ
ಆದರದಕೆ ತನ್ನೊಳಗೊಂದು ವಿಶ್ವ

ಇಲ್ಲಿ ಕಾಣುವುದೆಲ್ಲವೂ ಸಾಪೇಕ್ಷ
ಆದರೆ ಇರುವುದೆಲ್ಲವೂ ನಿರಪೇಕ್ಷ

ಕಪ್ಪುಗೋರಿಗಳೂ ಇಲ್ಲಿ ಸಾಯುತ್ತಿವೆ
ಭಾವಗಳು ವಿಕಿರಣವಾಗಿ ನಶಿಸುತ್ತಿವೆ

ಬುಧವಾರ, ಸೆಪ್ಟೆಂಬರ್ 20, 2017

ನಿನ್ನೆ - ನಾಳೆ

Image

 
 ನಾನಿದ್ದೀನಿ ಇಲ್ಲಿ
ಎತ್ತರವೋ ಆಳವೋ
ದೂರದಲ್ಲೋ ಹತ್ತಿರದಲ್ಲೋ

ಹತ್ತಿದಾಗ ಆಳ
ಇಳಿದಾದ ಎತ್ತರ
ನಡೆದಷ್ಟೂ ಹತ್ತಿರವು ದೂರ

ಅಲ್ಲಿರುವ ಅವ
ಇಲ್ಲಿದ್ದನೋ ಅಂದು
ಅಲ್ಲಿಗಳ ಇಲ್ಲಿ ಓಟದಲ್ಲಿ

ಅಲ್ಲಿರುವುದು ಆಳವೋ
ಇಲ್ಲಿರುವುದು ಎತ್ತರವೋ
ಕಂಡಹಾಗೆ ಅವನಿಗೆ ನಾನು

ಕಾಣುವುದು ಹೀಗೇ
ನೋಡುವುದು ಹೀಗೇ
ನೋಟ ಕಾಣುವುದು ಹಾಗೆ

ನನ್ನ ಆಳದಲ್ಲಿ
ಅವನ ಎತ್ತರದಲ್ಲಿ
ಹತ್ತಿರ ದೂರವೆಂಬುದು ಎಲ್ಲಿ?