
ನಿರಂಜನ ಮರು ಓದು ಮಾಲಿಕೆಯ ಪುಸ್ತಕಗಳ ಕಿರು ಪರಿಚಯ
– ಗುರುರಾಜ ದೇಸಾಯಿ
ನಿರಂಜನರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಆಯ್ದ ಬರಹಗಳ ನಾಲ್ಕು ಪುಸ್ತಕಗಳನ್ನು ಕ್ರಿಯಾ ಮಾಧ್ಯಮ ಪ್ರಕಟಿಸಿದೆ. ಆ ನಾಲ್ಕು ಪುಸ್ತಕಗಳ ಕಿರು ಪರಿಚಯ ಇಲ್ಲಿದೆ. ತೇಜಸ್ವಿನಿ ನಿರಂಜನ ಈ ಮಾಲಿಕೆಯ ಪ್ರಧಾನ ಸಂಪಾದಕರಾಗಿದ್ದಾರೆ.
ಬದುಕು-ಬರಹಗಳ ಕತೆ’ (ಸಂಪಾದಕರು : ತೇಜಸ್ವಿನಿ ನಿರಂಜನ, ಪುಟ : 120 , ಬೆಲೆ : ರೂ. 140)
ನಿರಂಜನರ ಬದುಕು, ಬರಹಗಳನ್ನು ಕನ್ನಡದ ಓದುಗರಿಗೆ ಪರಿಚಯಿಸುವ ಪ್ರಯತ್ನ `ನಿರಂಜನರ ಬದುಕು-ಬರಹಗಳ ಕತೆ’ ಮಾಲಿಕೆಯ ಮೊದಲ ಪುಸ್ತಕ. ಈ ಪುಸ್ತಕವನ್ನು ತೇಜಸ್ವಿನಿ ನಿರಂಜನ ಸಂಪಾದಿಸಿದ್ದಾರೆ. ನಿರಂಜನ ಅವರ ಬದುಕು- ಬರಹಗಳ ಒಂದು ಸ್ಥೂಲ ಪರಿಚಯ ಕೊಡುವುದು ಕಷ್ಟದ ಕೆಲಸ. ನಿರಂಜನರ ಬದುಕನ್ನು ಅವರ ಆತ್ಮಕಥಾತ್ಮಕ ಬರಹಗಳಿಂದ ಮತ್ತು ಅವರ ಬರಹಗಳನ್ನು ನಿರಂಜನರೇ ತಮ್ಮ ಬರಹಗಳ ಬಗ್ಗೆ ಬರೆದ ಬರಹಗಳಿಂದ ಕಟ್ಟಿಕೊಡಲಾಗಿದೆ. ನಿರಂಜನರ ಬದುಕು ಬರಹಗಳೆರಡೂ ಅಗಾಧ, ಹಲವು ಆಯಾಮಗಳಿಂದ ಕೂಡಿದ್ದು, ವೈವಿಧ್ಯಮಯವೂ ಆಗಿವೆ. ಈ ಪುಸ್ತಕದಲ್ಲಿ ಅವರೇ ಬರೆದ ಅವರ ಪ್ರಕಟಿತ ಕೃತಿಗಳ ಸಂಖ್ಯೆ 62 (25 ಕಾದಂಬರಿಗಳು, 9 ಕಥಾ ಸಂಕಲನಗಳು, 4 ನಾಟಕ ಸಂಗ್ರಹಗಳು, 2 ಜೀವನವೃತ್ತ, 2 ಲೇಖನ ಸಂಗ್ರಹ, 7 ಅಂಕಣ ಬರಹಗಳ ಸಂಗ್ರಹ, 10 ಭಾಷಾಂತರ ಕೃತಿಗಳು, 3 ರಾಜಕೀಯ ಬರಹಗಳ ಸಂಕಲನ) ಮತ್ತು 65 ಸಂಪಾದಿತ ಕೃತಿಗಳ 4 ಸರಣಿ (ಜ್ಞಾನಗಂಗೋತ್ರಿ 7 ಸಂಪುಟಗಳು, ವಿಶ್ವಕಥಾಕೋಶದ 25 ಸಂಪುಟಗಳು, ಪುರೋಗಾಮಿ 8 ಕೃತಿಗಳು, ಜನತಾ ಸಾಹಿತ್ಯದ 25 ಪುಸ್ತಕಗಳು). ಇವಲ್ಲದೆ 2500 ಪುಟಗಳಷ್ಟು ಅಪ್ರಕಟಿತ ಬಿಡಿಬರಹಗಳು, ಪ್ರಸಾರ ಭಾಷಣಗಳು, ರೇಡಿಯೊ ರೂಪಕಗಳು ಇವೆಯಂತೆ.
ಅವರ ಬಡತನ ಸಂಕಷ್ಟಗಳ ಬಾಲ್ಯ; ಜೀವನದುದ್ದಕ್ಕೂ ಬರಹಗಳಿಂದಲೇ ಬದುಕಿದ ಅದ್ವೀತಿಯ ಲೇಖಕ; ಭೂಗತ ಜೈಲುವಾಸ ಅನುಭವಿಸಿದ ಸ್ವಾತಂತ್ರ್ಯ ಹೋರಾಟಗಾರ, ಕಮ್ಯುನಿಸ್ಟ್ ರಾಜಕೀಯ ಕಾರ್ಯಕರ್ತ, ನಾಯಕ; ಸಾಹಿತ್ಯ ಚಳುವಳಿಯೊಂದರ ಹರಿಕಾರ; ಅಂಕಣ ಬರಹಗಳನ್ನು ಸಾಹಿತ್ಯದ ಪ್ರಕಾರಕ್ಕೇರಿಸಿದ ಪತ್ರಕರ್ತ; ಸಾಹಿತಿ, ಪತ್ರಕರ್ತರ ಸಂಘಟಕ; ಪುಸ್ತಕ ಪ್ರಕಾಶಕ; ಹಲವು ಕೃತಿಗಳ ಬೃಹತ್ ಸರಣಿಗಳ ಸಂಪಾದಕ – ಹೀಗೆ ಅವರ ಬದುಕಿಗೆ ಹಲವು ಆಯಾಮಗಳಿವೆ.
ಈ ಮೊದಲ ಪುಸ್ತಕದಲ್ಲಿ ಅವರ ಬದುಕು ಮತ್ತು ಬರಹಗಳ ಕತೆಯನ್ನು ಅವರ ಬರಹಗಳ ಆಯ್ದ ಭಾಗಗಳಿಂದಲೇ ಕಟ್ಟಿ ಕೊಡುವ ಪ್ರಯತ್ನ ಮಾಡಲಾಗಿದೆ. ಪುಸ್ತಕದಲ್ಲಿ ಎರಡು ಭಾಗಗಳಿವೆ. ಭಾಗ 1 ರಲ್ಲಿ ಅವರ ಬರಹಗಳಿಂದ ಆಯ್ದ ಆತ್ಕಕಥಾತ್ಮಕ ಭಾಗಗಳು (‘ಸಾಹಿತ್ಯ ಪ್ರೇರಣೆಯ ಮೊದಲ ಹೆಜ್ಜೆಗಳು’ ಎಂಬ ರೇಡಿಯೊ ಭಾಷಣ, ‘ಕುಳಕಂದ ಶಿವರಾಯ-ನಿರಂಜನ ಸಂವಾದ’ ಎಂಬ ವಿಶಿಷ್ಟ ಸಂದರ್ಶನ, ‘ನಿರಂಜನ ವಾಚಿಕೆ – ಪ್ರತಿಧ್ವನಿ’ ಯಲ್ಲಿನ ‘ಪಯಣ’, ‘ಬುದ್ಧಿ ಭಾವ ಬದುಕು’ ನಲ್ಲಿನ ‘ಬಂಧ-ಅನುಬಂಧ’, ಅನುಪಮಾ ಬರೆದ ‘ನಿರಂಜನ-ಅನುಪಮಾ’ ಇವೆ. ಭಾಗ-2 ರಲ್ಲಿ ಅವರ ಬರಹಗಳ ಚಿತ್ರಣವನ್ನು ಸಹ ಅವರ ಬರಹಗಳಿಂದ ಆಯ್ದ ಭಾಗಗಳಿಂದ (ಪ್ರಕಟಿತ ಪುಸ್ತಕಗಳ ಪಟ್ಟಿ, ‘ಪ್ರತಿಧ್ವನಿ’ ವಾಚಿಕೆಯಲ್ಲಿ ವಿವಿಧ ಪ್ರಕಾರಗಳಿಂದ ಆಯ್ದ ಬರಹಗಳ ಮೇಲಿನ ಟಿಪ್ಪಣಿ, ‘ಧ್ವನಿ-1’ ಮತ್ತು ‘ಧ್ವನಿ-2’ರಲ್ಲಿರುವ ‘ಕತೆಗಳು ಹುಟ್ಟಿದ ಬಗೆ’, ಪ್ರಮುಖ ಕೃತಿಗಳಿಗೆ ಬರೆದ ಮುನ್ನುಡಿಗಳು) ಕೊಡಲಾಗಿದೆ.
ಆಯ್ದ ಕತೆಗಳು (ಸಂಪಾದಕರು: ಎಂ.ಜಿ.ಹೆಗಡೆ, ಪುಟ : 120 , ಬೆಲೆ : ರೂ. 140)
ನಿರಂಜನರ ಬರಹದ ಪ್ರಕಾರಗಳಲ್ಲಿ ಮೊದಲನೆಯದೂ ಪ್ರಮುಖವೂ ಆದ ಕತೆಗಳ ಪ್ರಾತಿನಿಧಿಕ ಸಂಕಲನವಿದು. ನಿರಂಜನದ ಸಮಗ್ರ ಕಥಾ ಸಮುಚ್ಛಯ `ಧ್ವನಿ’ಯ ಎರಡು ಸಂಪುಟಗಳಲ್ಲಿ ಒಟ್ಟು ನೂರಾ ಐವತ್ತಾರು ಕಥೆಗಳಿವೆ. ಅವರು 1937 ರಲ್ಲಿ ತಮ್ಮ ಮೊದಲ ಕಥೆಯನ್ನು ಪ್ರಕಟಿಸಿದಾಗ ಅವರಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ಕಿಶೋರ. 1984 ರಲ್ಲಿ ತೀರಾ ಇತ್ತೀಚಿನ ಕಥೆ ಪ್ರಕಟವಾದಾಗ ಅವರು ತಮ್ಮ ಸಮಗ್ರ ಕಥಾ ಸಂಪುಟಗಳ ಪ್ರಕಟಣೆಯ ಸಿದ್ಧತೆಯಲ್ಲಿ ತೊಡಗಿದ್ದರು. ನಿರಂಜನರು ಕಥೆ ಬರೆಯುತ್ತಿದ್ದ ಕಾಲದಲ್ಲೇ ಪ್ರವರ್ಧಮಾನಕ್ಕೆ ಬಂದ ನವ್ಯ ಕಥೆ ಮತ್ತು ನವ್ಯ ವಿಮರ್ಶಾಕ್ರಮದ ಪರಿಣಾಮವಾಗಿ ಅ ಕಥಾ ಮಾರ್ಗಕ್ಕೆ ಸಮ್ಮತವಾದ ನಿರಂಜನರ `ಕೊನೆಯ ಗಿರಾಕಿ’ ಮಾತ್ರವೇ ಎಲ್ಲಾ ಪ್ರಾತಿನಿಧಿಕ ಸಂಕಲನಗಳಲ್ಲೂ ಸ್ಥಾನ ಪಡೆದು ನಿರಂಜನರ ಕಥಾ ಸಾಹಿತ್ಯದ ಸಮೃದ್ಧಿ ಅವಗಣನೆಗೆ ಒಳಗಾಗುವಂತಾಯಿತು.ನಿರಂಜನರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾಗುತ್ತಿರುವ ಈ ಸಂಕಲನ ಅವರ ಕಥಾಸಾಹಿತ್ಯದ ವೈವಿಧ್ಯದ ಕಡೆ ಗಮನ ಸೆಳೆಯುತ್ತದೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಕತೆಗಳಿವೆ. ಕರುಳಿನ ಕೂಗು, ಆ ಜೀವನ!, ಬೆಳಕು ಹರಿಯಿತು, ಕಾತ್ಯಾಯಿನಿ, ಕೋದಂಡ ಮತ್ತು ಕರಗ, ಒಂದೇ ನಾಣ್ಯದ ಎರಡು ಮೈ, ಡಿಲಕ್ಸ್, ಧ್ವನಿ, ಒಂಟಿ ನಕ್ಷತ್ರ ನಕ್ಕಿತು, ನಾಸ್ತಿಕ ಕೊಟ್ಟ ದೇವರು – ಇವು ಆ ಹತ್ತು ಕತೆಗಳು. ಅವನ್ನು ಅವು ಪ್ರಕಟವಾದ ಕಾಲಾನುಕ್ರಮದಲ್ಲಿ ಕೊಡಲಾಗಿದೆ. ನೂರಾ ಐವತ್ತಾರು ಕಥೆಗಳಲ್ಲಿ ಪ್ರಾತಿನಿಧಿಕ ಹತ್ತು ಕತೆಗಳನ್ನು ಆಯ್ಕೆ ಮಾಡುವುದು ಕಷ್ಟದ ಕೆಲಸ. ಈ ಹತ್ತು ಕತೆಗಳನ್ನು ಯಾಕೆ ಆಯ್ಕೆ ಮಾಡಲಾಗಿದೆ? ಆ ಕತೆಗಳು ನಿರಂಜನರ ಕತೆಗಳ ವಿನ್ಯಾಸದ, ಆವರಣಗಳ ವೈವಿಧ್ಯತೆ ಮತ್ತು ವಿಸ್ತಾರಗಳನ್ನು ಹೇಗೆ ಪ್ರತಿನಿಧಿಸುತ್ತವೆ? ಅವರ ವಾಸ್ತವವಾದಿ ಕಥನ ಕ್ರಮವು ಪ್ರಬುದ್ಧ ರಾಜಕೀಯ ಪ್ರಜ್ಞೆ ಹಾಗೂ ಸೈದ್ಧಾಂತಿಕ ಸ್ಪಷ್ಟತೆಯಿಂದ ಹೇಗೆ ನಿರ್ದೇಶಿತವಾಗಿದೆ? ಸಮಾಜದ ನಿರ್ಲಕ್ಷಿತ ಲೋಕಗಳ ವಾಸ್ತವವಾದಿ ಗ್ರಹಿಕೆ ಹಾಗೂ ಈ ಲೋಕಗಳ ಪಾಡನ್ನು ಓದುಗರ ಅಂತಃಕರಣಕ್ಕೆ ಮುಟ್ಟಿಸುವ ಬದ್ಧತೆ. ದುರ್ಬಲರಿಗೆ, ರೈತರು, ಕಾರ್ಮಿಕರು ಮತ್ತು ಮಹಿಳೆಯರಿಗೆ, ಧ್ವನಿ ಇಲ್ಲದೆ ಅಸಹಾಯಕರಾದವರಿಗೆ ಸಮಾಜದಲ್ಲಿ ಆಗುತ್ತಿರುವ ಕ್ರೂರ ಅನ್ಯಾಯವನ್ನು ಬಿಡಿಸಿ ತೋರಿಸುವ, ಆ ಮೂಲಕ ಓದುಗರ ಸಹಾನುಭೂತಿಯ ವಲಯವನ್ನು ಹೇಗೆ ವಿಸ್ತರಿಸುತ್ತವೆ? ಕಥಾ ಸಾಹಿತ್ಯದ ಉದ್ದೇಶವನ್ನು ಕುರಿತು ಹೇಗೆ ಚಿಂತಿಸುತ್ತದೆ? – ಇವೆಲ್ಲದರ ಕುರಿತು ಆಯ್ಕೆಯಾದ ಕತೆಗಳ ನಿರ್ದಿಷ್ಟ ಉದಾಹರಣೆಯೊಂದಿಗೆ ಈ ಸಂಗ್ರಹದ ಸಂಪಾದಕರಾದ ಎಂ.ಜಿ.ಹೆಗಡೆ ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ.
ಆಯ್ದ ಅಂಕಣ ಬರಹಗಳು (ಸಂಪಾದಕರು : ವಿಶ್ವ ಕುಂದಾಪುರ, ಪುಟ : 144, ಬೆಲೆ : 160)
ಕಥೆ ಕಾದಂಬರಿಗಳ ನಂತರ ನಿರಂಜನರ ಬರಹಗಳ ಪ್ರಕಾರಗಳಲ್ಲಿ ಪ್ರಮುಖವಾದದ್ದು ಮತ್ತು ಬಹುಶಃ ಸಂಖ್ಯಾತ್ಮಕವಾಗಿ ಅತಿ ದೊಡ್ಡದು ಅವರ ಅಂಕಣ ಬರಹಗಳು. ಸುಮಾರು ಎರಡುವರೆ ದಶಕಗಳಲ್ಲಿ (1945-70) ಹರಡಿದ್ದ ಅವರ ಒಟ್ಟು 13 ಅಂಕಣಗಳಲ್ಲಿ 7 ಅಂಕಣ ಬರಹಗಳು ಸಂಕಲನ ರೂಪದಲ್ಲಿ ಮುದ್ರಿತವಾಗಿವೆ. ಅವರ ಅಂಕಣಗಳು ಪ್ರಕಟವಾದ ಪತ್ರಿಕೆಗಳ ಸಂಖ್ಯೆ ಮಾತ್ರವಲ್ಲದೆ ಮುದ್ರಿತ ಅಂಕಣ ಬರೆಹಗಳ ಪ್ರಮಾಣವೂ ಗುಣಮಟ್ಟವೂ ವಿಷಯವೈವಿಧ್ಯವೂ ಅಗಾಧವಾದುದು. ಅವರ ಒಟ್ಟು ಅಂಕಣ ಬರಹಗಳ ಸಂಖ್ಯೆ 2000ಕ್ಕಿಂತಲೂ ಹೆಚ್ಚು. ಕನ್ನಡದ ಪತ್ರಿಕೆಗಳಲ್ಲಿ ಮತ್ತು ಸಾಹಿತ್ಯದಲ್ಲಿ ಅಂಕಣವನ್ನು ಒಂದು ಪ್ರಕಾರವನ್ನಾಗಿ ನೆಲೆಗೊಳಿಸಿದ್ದರಲ್ಲಿ ನಿರಂಜನ ಅಗ್ರಗಣ್ಯರು ಎನ್ನುವುದು ನಿಸ್ಸಂದೇಹವಾಗಿದೆ. ಇಷ್ಟು ವಿಸ್ತಾರವಾದ ಅಂಕಣ ಬರಹಗಳಲ್ಲಿ ಈ ಅಗಾಧ ವೈವಿದ್ಯತೆಯನ್ನು ಪ್ರತಿನಿಧಿಸುವ ಬರಹಗಳ ಆಯ್ಕೆ ಮಾಡುವುದು ಸುಲಭದ ಮಾತಲ್ಲ. ಇದನ್ನು ಸಮರ್ಥವಾಗಿ ನಿರ್ವಹಿಸಿದವರು, ಕನ್ನಡದ ಹಿರಿಯ ಪತ್ರಕರ್ತರಲ್ಲಿ ಒಬ್ಬರಾದ ಮತ್ತು ಈ ಪುಸ್ತಕದ ಸಂಪಾದಕರಾದ ವಿಶ್ವ ಕುಂದಾಪುರ. ನಿರಂಜನರ ಈ ಅಗಾಧ ಅಂಕಣ ಬರಹಗಳ ಲೋಕದ ಸ್ಥೂಲ ಆದರೂ ಸಮಗ್ರ ಪರಿಚಯ ಕೊಡುವ “ಕನ್ನಡ ಪತ್ರಿಕಾ ಆವರಣದಲ್ಲಿ `ಅಂಕಣ’ ತೋರಣ ಕಟ್ಟಿದ ಪತ್ರಕರ್ತ” ಎಂಬ ದೀರ್ಘ ಮುನ್ನುಡಿ ಪುಸ್ತಕದ ಮೆರುಗನ್ನು ಹೆಚ್ಚಿಸಿದೆ.
ಅಂಕಣ ಬರೆಹಗಳ ಈ ಸಂಗ್ರಹದಲ್ಲಿ 1950ರಿಂದ 1970ರ ವರೆಗಿನ ಸಾಧನ ಸಂಚಯ, ಅಂಕಣ, ರಾಜಧಾನಿಯಿಂದ ಮತ್ತು ದಿನಚರಿಯಿಂದ ಸಂಕಲನಗಳಿAದ ಆಯ್ದ 33 ಬರೆಹಗಳಿವೆ. ಇವುಗಳಲ್ಲಿ ವೈಯಕ್ತಿಕ ಅನಿಸಿಕೆ, ಸಾಹಿತ್ಯ-ಸಾಹಿತಿ, ಸಾಂಸ್ಕೃತಿಕ ನೀತಿ, ಮಾಧ್ಯಮ, ವಿಜ್ಞಾನ-ತಂತ್ರಜ್ಞಾನ, ನಾಡು-ರಾಜಕೀಯ ಮತ್ತು ಜಾಗತಿಕ – ಹೀಗೆ ವರ್ಗೀಕರಿಸಲಾದ ಅಧ್ಯಾಯಗಳಲ್ಲಿ ಪ್ರತಿ ವಿಷಯಗಳ 3-4 ಬರೆಹಗಳಿವೆ. ಇವುಗಳನ್ನು ಅವರ ವಿಷಯ, ಶೈಲಿಗಳಲ್ಲಿ ಅಗಾಧ ವೈವಿಧ್ಯತೆ, ಧೋರಣೆಗಳನ್ನು ಮತ್ತು ಮೂರು ದಶಕಗಳ ದೀರ್ಘಕಾಲದಲ್ಲಿ ಅವರ ಬೆಳವಣಿಗೆಯನ್ನು ಬಿಂಬಿಸುವಂತೆ ಆಯ್ದುಕೊಳ್ಳಲಾಗಿದೆ. ಕೆಲವು ಬರೆಹಗಳು ನಿರಂಜನರೇ ಸ್ವತಃ ಸಂಪಾದಿಸಿ 1987ರಲ್ಲಿ ಪ್ರಕಟವಾದ ತಮ್ಮ ಬರೆಹಗಳ ವಾಚಿಕೆ ‘ಪ್ರತಿಧ್ವನಿ’ಯಿಂದ ಆಯ್ದವು. ಇವು ಸ್ವಾಂಪಲ್ ಮಾತ್ರ. ಆದರೆ ನಿರಂಜನರ ಅಂಕಣ ಬರೆಹಗಳ ವೈವಿಧ್ಯತೆ, ಆಳ, ವಿಶಿಷ್ಟ ಶೈಲಿಯ ಒಂದು ನೋಟ ಖಂಡಿತ ಕೊಡುತ್ತದೆ. ಈ ಓದು ಅವರ ಎಲ್ಲ ಅಂಕಣ ಬರಹಗಳ ಸಮಗ್ರ ಅಧ್ಯಯನಕ್ಕೆ, ಮೌಲ್ಯಮಾಪನಕ್ಕೆ ಉತ್ತೇಜಿಸುವ ಸಾಧ್ಯತೆ ಹೊಂದಿವೆ. ಮುನ್ನುಡಿಯಲ್ಲಿ ನಿರಂಜನರ ಅಂಕಣ ಬರಹಗಳ ವಿಶಿಷ್ಟತೆಗಳಾದ ಪದಗಳ ಬಳಕೆ, ಇಂದಿಗೂ ಸಲ್ಲುವ ಪ್ರಸ್ತುತತೆ, ಆಳ ಅನುಭವ, ಸೂಕ್ಷ್ಮ ನಿರೀಕ್ಷಣೆ, ಬದುಕಿಗೆ ನಿಷ್ಠೆಯ ಕುರಿತೂ ಬರೆಯಲಾಗಿದೆ.
ಆಯ್ದ ಸಾಹಿತ್ಯಕ ಬರಹಗಳು (ಸಂಪಾದಕರು : ಮೀನಾಕ್ಷಿ ಬಾಳಿ, ಪುಟ : 144 , ಬೆಲೆ : 160)
ಕನ್ನಡದ ಸಾಹಿತ್ಯಕ ಚಳುವಳಿಗಳಲ್ಲಿ ಒಂದಾದ ‘ಪ್ರಗತಿಶೀಲ ಚಳುವಳಿ’ಯ ಹರಿಕಾರ ಮತ್ತು ನೇತಾರರಾಗಿ ನಿರಂಜನ ಸೃಜನಶೀಲ ಸಾಹಿತ್ಯ ಬರೆಯುವುದಲ್ಲದೆ ಸಾಹಿತ್ಯವಿಪುಲವಾಗಿ ಪುಸ್ತಕ ಪರಿಚಯ, ಪುಸ್ತಕ ವಿಮರ್ಶೆ ಮಾಡಿದವರು. ಸಾಹಿತಿಗಳ ಕುರಿತು ನುಡಿಚಿತ್ರವಲ್ಲದೆ ವಿಮರ್ಶಾತ್ಮಕವಾಗಿ ಬರೆದವರು. ನಿರಂಜನರ ಸಾಹಿತ್ಯಕ ಬರಹಗಳ ಎರಡು ಪ್ರಮುಖ ಪ್ರಕಟಿತ ಸಂಕಲನಗಳೆಂದರೆ ‘ಬುದ್ಧಿ, ಭಾವ, ಬದುಕು’ ಮತ್ತು ‘ಮುಖತ:’ (ಸಂದರ್ಶನಗಳ ಸಂಕಲನ) ಇವಲ್ಲದೆ ಸಾಹಿತ್ಯ ಸಮ್ಮೇಳನಗಳಲ್ಲಿ ಮಾಡಿದ ಭಾಷಣಗಳು, ಅಂಕಣ ಬರಹಗಳಲ್ಲೂ ಸಾಹಿತ್ಯದ ಕುರಿತು ಅವರ ಚಿಂತನೆ ವಿಸ್ತಾರವಾಗಿ ಹರಡಿದೆ. ಈ ಸಂಕಲನದ ಸಂಪಾದಕರು ನಾಡಿನ ಪ್ರಮುಖ ಸಾಹಿತಿ, ಚಿಂತಕರಲ್ಲಿ ಒಬ್ಬರಾದ ಮೀನಾಕ್ಷಿ ಬಾಳಿ ಅವರು.
ಈ ಸಂಕಲನದಲ್ಲಿ ‘ಬುದ್ಧಿ ಭಾವ ಬದುಕು’ ಸಂಕಲನದ 16 ಬರಹಗಳನ್ನು ಆಯ್ದುಕೊಳ್ಳಲಾಗಿದೆ. ‘ಮುಖತಃ’ ಸಂಕಲನದ ಒಂದು ಸಂದರ್ಶನವನ್ನು ಆಯ್ಕೆ ಮಾಡಲಾಗಿದೆ. ಇದು ‘ಸಮುದಾಯ ವಾರ್ತಾಪತ್ರ’ಕ್ಕಾಗಿ ಕನ್ನಡದ ಇಂದಿನ ಮಹತ್ವದ ಲೇಖಕರಾಗಿರುವ ಬರಗೂರು ರಾಮಚಂದ್ರಪ್ಪನವರು ನಿರಂಜನರೊಂದಿಗೆ ಮಾಡಿದ ದೀರ್ಘ ಸಂದರ್ಶನ. ಈ ಬರಹಗಳನ್ನು ಆಯ್ಕೆ ಮಾಡುವಾಗ ನಿರಂಜನ ಲೇಖಕರಾಗಿ ಸಕ್ರಿಯವಾಗಿದ್ದಾಗಿನ ಸುಮಾರು ಐದು ದಶಕಗಳ ಸಾಹಿತ್ಯಕ ಲೋಕದ ಸ್ಥೂಲ ನೋಟ ಕೊಡುವ ಬರಹಗಳಲ್ಲದೆ, ಇಂದಿಗೂ ಪ್ರಸ್ತುತವಾಗಿರುವ ಸಾಹಿತ್ಯಕ ಪ್ರಶ್ನೆಗಳಿಗೆ ಒತ್ತು ಕೊಡಲಾಗಿದೆ. ಈ 17 ಲೇಖನಗಳಲ್ಲಿ ಸುಮಾರು ಅರ್ಧದಷ್ಟು ಬರೆಹಗಳು ಒಟ್ಟು ಪ್ರಗತಿಶೀಲ ಚಳುವಳಿಯ ನಡೆಯನ್ನು ಅದರ ಏಳು-ಬೀಳು, ಸಾಧಕ-ಭಾದಕಗಳನ್ನು ವಸ್ತುನಿಷ್ಟವಾಗಿ ಪೃಥಕ್ಕರಿಸಿವೆ. ಈ ಬರಹಗಳಿಗೆ ಪ್ರಗತಿಶೀಲ ಚಳುವಳಿಯೆಂಬ ಕೇಂದ್ರವಿದೆ. ಆದ್ದರಿಂದ ಪ್ರಗತಿಶೀಲ ಚಳುವಳಿಯನ್ನು ಕುರಿತು ಅಧ್ಯಯನ ಮಾಡುವವರಿಗೆ ಇದೊಂದು ಆಕರ ಕೃತಿಯಾಗಿ ಗಮನ ಸೆಳೆಯುತ್ತದೆ. ಉಳಿದರ್ಧ ಬರೆಹಗಳ ಸಾಹಿತ್ಯದ ಆಧುನಿಕೋತ್ತರ ಕಾಲಘಟ್ಟದಲ್ಲಿ ಕ್ರಮಿಸುತ್ತಿರುವ ನಮಗೆ ಹಿಂದಿನ ಸಾಹಿತಿಗಳ ವರ್ತನೆ, ಅವರ ಬದುಕಿನ ವಿನ್ಯಾಸಗಳು, ಜನತೆ ಅವರನ್ನು ಪರಾಂಬರಿಸುತ್ತಿದ್ದ ಬಗೆ, ಸಾಹಿತ್ಯ ಲೋಕದಲ್ಲಿ ನಡೆಯುತ್ತಿದ್ದ ವಾಗ್ವಾದಗಳ ಉತ್ತಮ ಚಿತ್ರಣ ನೀಡುತ್ತವೆ.
ನಿರಂಜನ ಶತಮಾನ ಮರು ಓದು ಮಾಲಿಕೆ ರಿಯಾಯತಿ ಬೆಲೆಯಲ್ಲಿ ಖರೀದಿಸಿ ಓದಿ
Filed under: ಬಿಡುಗಡೆ | Tagged: ಅನಂತ ಶಾಂದ್ರೇಯ, ಎಂ.ಜಿ.ಹೆಗಡೆ, ಎಚ್. ದಂಡಪ್ಪ, ಎಚ್.ವಿ.ನಟರಾಜ್, ಎನ್. ಗಾಯತ್ರಿ, ಎಲ್ ಎನ್ ಮುಕುಂದರಾಜ್, ಐ ಕೆ ಛಾಯಾ, ಡಾ.ರಂಗನಾಥ ಕಂಟನಕುಂಟೆ, ಡಾ.ರಾಜೇಂದ್ರ ಚೆನ್ನಿ, ತೇಜಸ್ವಿ ನಿರಂಜನ, ನವೀನ್ ಸೂರಿಂಜೆ, ನಿರಂಜನ, ಪ್ರತಿಭಾ ಭಟ್, ಮೀನಾಕ್ಷಿ ಬಾಳಿ, ವಿಶ್ವ ಕುಂದಾಪುರ | Leave a comment »















