–ಶಾಂಭವಿ. ಎನ್
ಕರಾವಳಿಯ ಶರಾವತಿ ನದಿಯ ತಪ್ಪಲಿನಲ್ಲಿರುವ ಸಣ್ಣ ಹಳ್ಳಿಯೇ ʼಗ್ರೀಶ್ಷ್ಮಾವಳಿʼ. ಹೆಸರಿನಷ್ಟೆ ವಿಚಿತ್ರವಾಗಿರುವುದು ಅಲ್ಲಿನ ಪರಿಸರ. ಇಂದಿಗೆ ಸುಮಾರು ವರ್ಷದ ಹಿಂದಿನ ಕಾಲವದು. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುವ ಆ ಹಳ್ಳಿಯ ನಿಸರ್ಗ ಸೌಂದರ್ಯಕ್ಕೆ ಬೇರಾವುದೂ ಸಾಟಿಯಿಲ್ಲ. ಸೂರ್ಯನ ಕಿರಣಗಳು ಇರುವಷ್ಟು ಹೊತ್ತು ಸಂಭ್ರಮ. ಆದರೆ ಹೊತ್ತು ಮುಳಿಗಿದ ನಂತರ ಅದು ಬೇರೆಯದೇ ಪ್ರಪಂಚವೆನಿಸುತ್ತದೆ. ಹಗಲಿನ ಬೆಳಕಿನ ಚೈತನ್ಯ ರಾತ್ರಿಯ ನಿಗೂಢತೆಯೊಂದಿಗೆ ಕೊನೆಗೊಳ್ಳುತ್ತದೆ. ಇಂತಹ ಸಣ್ಣ ಹಳ್ಳಿಯಲ್ಲಿ ಪುಟ್ಟ ಮನೆಯಲ್ಲಿದ್ದುದು ಸುಬ್ರಾಯನ ಕುಟುಂಬ. ಹವ್ಯಕ ಬ್ರಾಹ್ಮಣ ಕುಟುಂಬದವನಾದ ಆತ ಅಲ್ಲಿ ತನ್ನದೇ ಚಿಕ್ಕ ಪ್ರಪಂಚವೊಂದನ್ನು ನಿರ್ಮಿಸಿಕೊಂಡಿದ್ದ. ಹೆಚ್ಚೇನು ಆರ್ಥಿಕವಾಗಿ ಸದೃಢನಾಗಿಲ್ಲದಿದ್ದರೂ ಮನೆಯಲ್ಲಿ ಸುಖ, ನೆಮ್ಮದಿಗೆ ಯಾವುದೇ ಕೊರತೆಯಿರಲಿಲ್ಲ. ಎಲ್ಲ ಆತನ ಪ್ರೀತಿಯ ಮಡದಿ, ಸುಬ್ಬಿಯ ಕೈಚಳಕ. ಆಕೆಯ ತಂದೆ ಹದಿನಾರನೇ ವಯಸ್ಸಿಗೆ ಆಕೆಯನ್ನು ಮದುವೆ ಮಾಡಿದ್ದರು. ಆಗಿನ ಕಾಲ ಹಾಗಿತ್ತು. ಮದುವೆಯಾದದ್ದು ಹದಿನಾರನೇ ವಯಸ್ಸಿಗಾದರೂ, ಆಕೆಯನ್ನು ಶಾಲೆಯಿಂದ ಬಿಡಿಸಿದ್ದು ನಾಲ್ಕನೇ ಕ್ಲಾಸಿಗೆ. ಮನೆ ತುಂಬಾ ಮಕ್ಕಳು. ಅವರನ್ನೆಲ್ಲಾ ನೋಡಿಕೊಳ್ಳಲು ಮನೆಯ ಹಿರಿಮಗಳಾದ ಸುಬ್ಬಿ ತನ್ನ ವಿದ್ಯೆ ಹಾಗು ಬಾಲ್ಯವನ್ನು ತ್ಯಾಗ ಮಾಡಿದ್ದಳು. ಯಾರೋ ಮಹಾನ್ ತೇಜಸ್ವಿ ಅವಳ ತಂದೆಗೆ ಹೇಳಿದ್ದನಂತೆ. ಆಕೆಯ ಕೈಯಲ್ಲಿ ವಿದ್ಯಾ ರೇಖೆ ಬಹಳ ಉದ್ದವಾಗಿದ್ದು, ವಿದ್ಯೆ ಅವಳಿಗೆ ಒಲಿಯುತ್ತೆ. ಮುಂದೆ ಮಾಸ್ತರಣಿ ಆಗುವ ಸಂಭವವಿದೆಯೆಂದು. ಆದರೆ ಅವನಿಗೇನು ಗೊತ್ತು, ಆಕೆ ಶಾಲೆ ಬಿಟ್ಟು ಸುಬ್ರಾಯನ ಮನೆಯಾಕಿಯಾಗುತ್ತಾಳೆಂದು.
‘ಬಡವನಾದರೆ ಏನು ಪ್ರಿಯೆ, ಕೈ ತುತ್ತು ತಿನಿಸುವೆʼ ಎಂದು ಹಾಡಿಕೊಂಡೆ ಸುಬ್ರಾಯ ಸುಬ್ಬಿಯ ಮನಗೆದ್ದಿದ್ದ. ಮನೆಯಲ್ಲಿ ಮೂರು ಸಣ್ಣ ಮಕ್ಕಳ ಕಲರವ. ಅಷ್ಟಾಗಿಯೂ ಅವರ ನಡುವೆ ಪ್ರೀತಿ ಹಾಗೇ ಇತ್ತು. ದಿನವಿಡೀ ಮನೆಯಲ್ಲಿ, ತೋಟದಲ್ಲಿ, ಕೊಟ್ಟಿಗೆಯಲ್ಲಿ ದುಡಿಯುವಾಕೆ ಸುಬ್ಬಿಯಾದರೆ, ಹೊರಗೆ ಹೋಗಿ, ಆಮಂತ್ರಣ ನೀಡಿದ ಕಡೆ ಪೂಜೆ ಪುನಸ್ಕಾರಗಳನ್ನು ಮಾಡಿಸಿ, ಅವರು ನೀಡಿದ ಅಷ್ಟೋ ಇಷ್ಟೋ ಪುಡಿಗಾಸು ಚಿಲ್ಲರೆಯನ್ನು ಸಂಭಾವನೆಯಾಗಿ ಪಡೆದುಕೊಂಡು, ಅವರಿತ್ತ ಅಕ್ಕಿ-ಕಾಯಿಯನ್ನು ಮನೆಗೆ ತಂದುಹಾಕುವವನಾಗಿದ್ದ ಸುಬ್ರಾಯ. ಆತ ಕೆಲಸಕ್ಕೆ ಹೋದರೇನೆ ಮನೆಯಲ್ಲಿ ಒಲೆ ಉರಿಯುತ್ತಿತ್ತು. ಇಲ್ಲವಾದಲ್ಲಿ ಹೊಟ್ಟೆಗೆ ತಣ್ಣಿರ್ ಬಟ್ಟೆ. ಹಸಿವನ್ನು ಅಪ್ಪಿಕೊಂಡೇ ಮಲಗಬೇಕಿತ್ತು.
ಸಿಟಿಯಿಂದ ಬಹಳ ದೂರವಿತ್ತು ಆ ಹಳ್ಳಿ. ಏನೇ ಬೇಕಾದರು ಕುದಬೈಲು ಎಂಬ ಪಟ್ಟಣಕ್ಕೆ ಹೋಗಬೇಕಿತ್ತು. ಅದು ಇರುವುದು ಹಳ್ಳಿಯಿಂದ ೪ ಕಿ.ಮೀ ದೂರದಲ್ಲಿ. ಕಾಲಲ್ಲಿ ಶಕ್ತಿ, ಮನಸ್ಸಿನಲ್ಲಿ ಹುರುಪಿದ್ದವರು ಅಷ್ಟು ದೂರ ನಡೆಯಬಹುದಷ್ಟೆ. ಬಸ್ಸು, ಟೆಂಪೋ ಏನು ಸಿಗದ ಜನನಿಬಿಡ ಮಾರ್ಗವದು. ಬೆಳಗ್ಗೆ ಹೊತ್ತೇ ಆ ದಾರಿಯಲ್ಲಿ ಹೋಗಲು ಜನ ಹಿಂಜರಿಯುತ್ತಾರೆ. ಇನ್ನು, ಸಂಜೆ ಅಥವಾ ರಾತ್ರಿ ಹೊತ್ತು ಕೇಳಬೇಕಾ? ತಲೆಯಲ್ಲಿ ಬುದ್ಧಿಯಿರುವವರು ಆ ಯೋಚನೆಗೆ ಸುತಾರಾಂ ʼಇಲ್ಲʼವೆಂದುಬಿಡುತ್ತಾರೆ.
ಹೀಗೆ ದೀಪಾವಳಿಯ ನರಕಚತುರ್ದಶಿಯ ಮುಂದಿನ ದಿನವಾದ ಅಮಾವಾಸ್ಯೆಯಂದು ಸುಬ್ರಾಯನಿಗೆ ನೀಲಕೋಡು ಎಂಬ ಊರಿನಲ್ಲೊಂದು ಕೆಲಸ ಬಂದೊದಗಿತ್ತು. “ಭಟ್ಟರೆ,ಅಮಾವಾಸ್ಯೆಯಂದು ನಂಗಳ ಮನೆಯಲ್ಲೊಂದು ಶನಿ ಕಥೆ ಮಾಡಿಸಬೇಕು. ನೀವೇ ಮುದ್ದಾಮು ಬಂದು ಮಾಡಿಕೊಡಕ್ಕು” ಎಂದು ಲಕ್ಷ್ಮಣ ಹೆಗಡೆಯವರು ಸುಬ್ರಾಯನಲ್ಲಿ ಕೇಳಿಕೊಂಡಿದ್ದರು. “ಅಡ್ಡಿಲ್ಲೆ, ಹೆಗಡೆಯವರೆ, ನಾ ಬಂದು ಮಾಡಿಕೊಡ್ತೆ” ಎಂದು ಹವ್ಯಕ ಕನ್ನಡ ಭಾಷೆಯಲ್ಲೆ ಸುಬ್ರಾಯನು ಒಪ್ಪಿಗೆ ಸೂಚಿಸಿದ್ದ. ಆ ಭಾಗದಲ್ಲಿ ಎಲ್ಲರೂ ಅದೇ ಭಾಷೆಯಲ್ಲೇ ಮಾತನಾಡುವವರು. ಕೇಳಲಿಕ್ಕೆ ಬಲು ಹಿತವಾದ, ಸೋಜಿಗದ ಕನ್ನಡ ಭಾಷಾ ಶೈಲಿಯದು.
ದೀಪಾವಳಿಯೆಂದರೆ, ಬೆಳಕಿನ ಹಬ್ಬ. ತನ್ನೊಂದಿಗೆ ಹಲವಾರು ಸುಖ ಸಂತೋಷವನ್ನು ತರುವ ʼದೊಡ್ಡʼ ಹಬ್ಬವದು. ಮನೆಯಲ್ಲಿ ದಿನಸಿ ಸಾಮಾನುಗಳು ತುಂಬಿ ತುಳುಕುವ ಸಮೃದ್ಧಿಯ ಸಮಯವದು. ಆದರೆ ಸುಬ್ರಾಯನ ಮನೆಯಲ್ಲಿ ಆ ಪರಿಸ್ಥಿತಿಯಿರಲಿಲ್ಲ. ಹೆಗಡೆಯವರ ಮನೆಯ ಕೆಲಸ ಅಮಾವಾಸ್ಯೆಯಂದಿದ್ದು, ಅಲ್ಲಿಂದ ವಾಪಸ್ಸು ಬರುವಾಗ ಮನೆಗೆ ದಿನಸಿ ಸಾಮಾನುಗಳನ್ನು ಹಾಗು ಮಕ್ಕಳಿಗೆ ಹೊಸ ಅಂಗಿ-ಚಡ್ಡಿಗಳನ್ನು ತರುವುದಾಗಿ ಸುಬ್ರಾಯನು ಸುಬ್ಬಿಯ ಮನವೋಲೈಸಿದ್ದ. ಆ ಶನಿ ದೇವರೇ ಅವನ ಮೇಲೆ ದಯೆ ತೋರಿ ಆ ಕೆಲಸ ಅವನಿಗೆ ಸಿಕ್ಕಿದ್ದಾಗಿ ಆತ ನಂಬಿದ್ದ.
ಎತ್ತಿನ ಗಾಡಿಯ ಚಕ್ರ ಉರುಳಿದಂತೆ ಉರುಳಿಹೋಗುತ್ತದೆ ಸಮಯ. ಅದರಂತೆ, ಅಮಾವಾಸ್ಯೆಯೂ ಬಂತು, ಸುಬ್ರಾಯನ ಪೂಜೆಯೂ ಮುಗಿದಿತ್ತು. ಹೆಗಡೆಯವರು ನೀಡಿದ ಸಂಭಾವನೆಯಿಂದ ಕುದಬೈಲಿಗೆ ಹೋಗಿ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ದಿನಕರ ಶೆಟ್ಟಿಯ ಅಂಗಡಿಯಲ್ಲಿ ತೆಗೆದುಕೊಂಡು, ಅಲ್ಲೇ ಹತ್ತಿರದಲ್ಲಿದ್ದ ಗರೀಮ ವಸ್ತ್ರಾಲಯದಿಂದ, ಹೆಂಡತಿ ಮಕ್ಕಳಿಗೆ ಬಟ್ಟೆ ಖರೀದಿಸಿ, ಅವೆಲ್ಲವನ್ನು ಒಂದು ದೊಡ್ಡ ಚೀಲದಲ್ಲಿ ಹಾಕಿಕೊಂಡು ಆ ಮೂಟೆಯನ್ನು ತಲೆಯ ಮೇಲಿರಿಸಿಕೊಂಡು ಮನೆಯ ಹಾದಿ ಹಿಡಿಯುವಷ್ಟರಲ್ಲಿ ರಾತ್ರೆ ಒಂಭತ್ತು ಗಂಟೆಯಾಗಿತ್ತು.
ಕುದಬೈಲಿನಿಂದ ಅವನಿದ್ದ ಗ್ರೀಷ್ಮಾವಳಿಗೆ ಹೋಗಬೇಕಾದರೆ ಒಂದೇ ಉದ್ದನೆಯ ಹಾದಿ. ʼಕುದಬೈಲ್ ರೋಡ್ʼ ಎಂದು ಕರೆಯುತ್ತಿದ್ದರದಕ್ಕೆ. ಆ ರೋಡು ಬಹಳ ಕಿರಿದಾಗಿದ್ದು , ಅದರ ಎಡ ಬದಿಗೆ ಕೊಳಪೆ ಗುಡ್ಡವಿತ್ತು ಹಾಗು ಬಲಬದಿಗೆ ಕೆಂಡಸಂಪಿಗೆ ಹೊಳೆಯಿತ್ತು. ಆ ಏರು ರಸ್ತೆಯನ್ನು ಆ ಮೂಟೆಯೊಂದಿಗೆ, ಅದೂ ಆ ಕಗ್ಗತ್ತಲಿನಲ್ಲಿ ಹತ್ತುವುದು ಸುಬ್ರಾಯನಿಗೆ ಕಷ್ಟವೆನಿಸಿತು. ಆದರೂ ನಾಳಿನ ಬಲಿಪಾಢ್ಯಮಿ ಹಬ್ಬಕ್ಕಾದರೂ ಮನೆ ಸೇರಿ ಹೆಂಡತಿ ಮಕ್ಕಳಿಗೆ ತಂದ ಉಡುಗೊರೆ ನೀಡಿ ಅವರಿಗೆ ಖುಷಿಪಡಿಸಬೇಕೆಂಬ ಹಂಬಲದಿಂದ ಎಷ್ಟೇ ಕಷ್ಟವಾದರೂ, ಒಬ್ಬನೇ ಆ ಕತ್ತಲಿನಲ್ಲಿ ಹೋಗಬೇಕೆಂದು ಭಯವಾದರು ಮುಂದುವರೆದ. ಬೇರೇ ಯಾವುದೇ ದಿನವಾದರೂ ತಿಂಗಳು ಬೆಳಕಾದರೂ(ಚಂದ್ರನ ಬೆಳಕು) ದಾರಿ ತೋರಲು ಇರುತಿತ್ತು. ಆದರೆ ಆತ ಅಂದು ನಡೆದು ಹೋಗುತ್ತಿದ್ದ ದಿನ ʼಅಮಾವಾಸ್ಯೆʼಯಾಗಿದ್ದರಿಂದ ಅದೂ ಇರಲಿಲ್ಲ.
ಹೀಗೆ ಕತ್ತಲೆಯ ಹಾದಿಯಲ್ಲಿ ನಡೆಯುತ್ತಾ ಸ್ವಲ್ಪ ಹೊತ್ತಾಗಿತ್ತು. ಆಗ ಆ ರೋಡಿನ ಮೇಲಿಂದ ಯಾರೋ ಇಬ್ಬರು ಸೂಡಿ ಹಿಡಿದು ಬರುತ್ತಿದ್ದುದ್ದನ್ನು ಗಮನಿಸಿದ ಸುಬ್ರಾಯ. ಒಣಗಿದ ತೆಂಗಿನ ಗರಿಗೆ ಬೆಂಕಿ ಹಚ್ಚಿ ಅದನ್ನು ಬೆಳಕಿಗಾಗಿ ಬಳಸುವುದನ್ನು ʼಸೂಡಿʼ ಎಂದು ಕರೆಯುತ್ತಾರೆ. ಇಂದಿನ ಒಲಿಂಪಿಕ್ ಟಾರ್ಚಿಗೆ ಅದನ್ನು ಹೋಲಿಸಬಹುದಾಗಿದೆ.

ಅಬ್ಬಾ, ಸದ್ಯ! ಆ ದೇವರೇ ತನಗೆ ದಾರಿ ತೋರಲು ಈ ಸೂಡಿ ಹಿಡಿದ ಮನುಷ್ಯರನ್ನು ಕಳಿಸಿರಬೇಕು ಅಂದುಕೊಂಡ ಸುಬ್ರಾಯ. ಆದರೆ ಅ ಸೂಡಿ ಹಿಡಿದ ಮನುಷ್ಯರು ಸ್ವಲ್ಪ ಹತ್ತಿರವಾಗುತ್ತಿದ್ದಂತೆಯೇ ಆತ ಕಂಡಿದ್ದೇ ಬೇರೆ. ಮುಖದ ಮೇಲಿದ್ದ ಶಾಂತಚಿತ್ತತೆ, ಭಯಾನಕ ರಸಕ್ಕೆ ತಿರುಗಿತ್ತು. ಬಿಳೀ ಬಣ್ಣದ ನಿಲುವಂಗಿ ಧರಿಸಿದ ಅವರು ತಲೆಯ ಮೇಲೆ ಗೋಣಿ ಚೀಲ ಹೊದೆದಿದ್ದುಅವರ ಕಾಲು ಕಾಣುವಂತೆ ಇರಲಿಲ್ಲ ಮತ್ತು ಅವರ ಮುಖ ಬಹಳ ಕಪ್ಪಗಿತ್ತು. ಮುಖದಲ್ಲಿರುವ ಕಣ್ಣು, ಮೂಗು, ಬಾಯಿ ಮುಂತಾದ ಯಾವುದೇ ಅಂಗಾಂಗಳು ಕಾಣುವಂತಿರಲಿಲ್ಲ. ಆಗ ಸುಬ್ರಾಯನಿಗೆ ಮತ್ತಷ್ಟು ಹೆದರಿಕೆಯಾಗಲು ಶುರುವಾಯಿತು. ನೋಡನೋಡುತ್ತಿದ್ದಂತೆ ಎಡಬದಿಯ ಕೊಳಪೆ ಬೆಟ್ಟದಿಂದ , ಬಲಬದಿಯ ಕೆಂಡಸಂಪಿಗೆ ಹೊಳೆಯ ಬದಿಯಿಂದ ಹಾಗು ರೋಡಿನ ಕೆಳಬದಿಯಿಂದಲೂ ಕೂಡ ಅದೇ ರೀತಿಯ ಎರಡು ವಿಚಿತ್ರ ಮನುಷ್ಯರೆನಿಸುವ, ಏನೆಂದು ತಿಳಿಯದ ಜೀವಿಗಳು ಬರುತ್ತಿರುವುದು ಕಂಡಿತು. ಆಗ ಸುಬ್ರಾಯನ ಎದೆ ಢವಢವ ಸದ್ದು ಜೋರಾಯಿತು. ಕಣ್ಣು ಮಿಟುಕಿಸುವ ಹೊತ್ತಿನಲ್ಲಿ ಆ ವಿಚಿತ್ರ ಜೀವಿಗಳು ಆತನನ್ನು ಸುತ್ತುವರೆದಿದ್ದವು. ಅವು ವಿಚಿತ್ರ ಜೀವಿಗಳೋ ಅಥವಾ ಜೀವವಿಲ್ಲದ ಮತ್ಯಾವುದೋ ವಿಭಿನ್ನ ಆಕೃತಿಯೋ, ಯಾವುದೂ ಸುಬ್ರಾಯನಿಗೆ ಅರ್ಥವಾಗಲಿಲ್ಲ. ತನ್ನ ಸುತ್ತಲೂ ಏನಾಗುತ್ತಿದೆ? ಇವರೆಲ್ಲ ಯಾರು? ತನ್ನಿಂದೇನಾಗಬೇಕು ಇವರಿಗೆ? ಯಾಕೆ ತನ್ನನ್ನು ಸುತ್ತುವರೆದಿದ್ದಾರೆ ಇವರೆಲ್ಲಾ? ಅಷ್ಟಕ್ಕೂ ಏನಾಗುತ್ತಿದೆಯಿಲ್ಲಿ? ಇವೆಲ್ಲಾ ಆತನ ಮೆದುಳಿನಲ್ಲಿ ಹಾದು ಹೋದ ಪ್ರಶ್ನೆಗಳು. ಇಂದಿಗೂ ಉತ್ತರ ಸಿಗದ ʼಬಗೆಹರಿಯದ ಪ್ರಶ್ನೆಗಳವುʼ.
ಇನ್ನೇನು ಮಾಡಲೂ ತೋಚದ ಸುಬ್ರಾಯ ಆ ಮೂಟೆಯನ್ನು ಹೊತ್ತಿಕೊಂಡೇ ಹಿಂಗಾಲಿನಲ್ಲಿ ಕಣ್ಮುಚ್ಚಿ ತನ್ನ ಮನೆದೇವರ ಧ್ಯಾನ ಮಾಡುತ್ತಾ ಸುಮಾರು ಒಂದು ಕಿಲೋ ಮೀಟರ್ ಹಿಂದೆ ಬಂದು ಗಕ್ಕನೆ ಅಂಗಡಿಯ ಮುಂದೆ ಬಂದು ನಿಂತವನಿಗೆ ಒಮ್ಮೆಲೆ ಕಣ್ಣು ತೆರೆಯಬೇಕೆನಿಸಿತು. ಆತ ಸರಿಯಾಗಿ ಕುದಬೈಲು ರಾಂಭಟ್ಟನ ಅಂಗಡಿಯ ಮುಂದೆ ಬಂದು ನಿಂತಿದ್ದ. ಮೈಯೆಲ್ಲ ಹೊಳೆಯಲ್ಲಿ ಮಿಂದೆದ್ದಂತೆ ಬೆವರಿನಲ್ಲಿ ತೊಯ್ದುಹೋಗಿತ್ತು.
ಸುಬ್ರಾಯನ್ನು ಈ ಪರಿಸ್ಥಿತಿಯಲ್ಲಿ ಕಂಡ ರಾಂಭಟ್ಟ, “ಅರೇ, ಸುಬ್ರಾಯ ಭಟ್ಟರು, ಇದೆಂತ ಇಷ್ಟು ರಾತ್ರೇಲಿ ನೀವಿಲ್ಲಿ? ಇದೆಂತಾ ನಿಮ್ಮ ಅವಸ್ಥೆ?” ಎಂದು ಕೇಳಿದ. ಆದದ್ದನೆಲ್ಲಾ ವಿವರಿಸಿದ ಸುಬ್ರಾಯನನ್ನು ತಮ್ಮ ಅಂಗಡಿಯೊಳಗೆ ಕರೆಸಿ ಕುಡಿಯಲು ನೀರು ಕೊಟ್ಟು , “ಭಟ್ಟ್ರೇ, ಇಂದು ಇಲ್ಲೇ ಉಳಿದುಕೊಳ್ಳಿ. ನಾಳೆ ಮನೆಗೆ ಹೋಗಿ. ಈಗ ತುಂಬಾ ರಾತ್ರೆಯಾಯ್ದು” ಎಂದು ಹೇಳಿ ಅಂದಿನ ರಾತ್ರಿ ಸುಬ್ರಾಯನಿಗೆ ರಾಂಭಟ್ಟರು ಆಶ್ರಯ ನೀಡಿದರು.
ಈ ಘಟನೆ ನೆಡೆದು ಇಂದಿಗೆ ಸರಿಸುಮಾರು ಒಂದು ೩೦ ವರ್ಷಗಳಾಗಿರಬಹುದು. ಸುಬ್ರಾಯ ಈಗ ಅದೇ ಮನೆಯಲ್ಲಿ ವಾಸವಾಗಿದ್ದಾನೆ. ಆಗೀಗ ಮೊಮ್ಮಕ್ಕಳು ಊರಿಗೆ ಬರುತ್ತಾರೆ. ಬಂದಾಗಲೆಲ್ಲ “ಅಜ್ಜ, ಒಂದು ಕಥೆ ಹೇಳೊ” ಎಂದಾಗಲೆಲ್ಲ ಆತ ಇದೇ ನೈಜ ಘಟನೆಯನ್ನ ಹೇಳ್ತಾನೆ. ಆದರೆ ಇಂದಿಗೂ ಆತನ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ. ಅಂದು ನೆಡೆದದ್ದಾದರೂ ಏನು? ಯಾರವರೆಲ್ಲ? ಒಟ್ಟಿನಲ್ಲಿ ಆತನ ಜೀವನದಲ್ಲಿ ಅದೊಂದು ಬಗೆಹರಿಯದ ಪ್ರಶ್ನೆಯಾಗಿ ಇಂದಿಗೂ ಉಳಿದುಕೊಂಡಿರುವುದರಲ್ಲಿ ಸಂಶಯವಿಲ್ಲ.
——————————————————————————–
ಇದು ನಾನು ಪ್ರಕಟಿಸುತ್ತಿರುವ ನನ್ನ ಎರಡನೇ ಕಥೆ. ನಿಮಗೆ ಕಥೆ ಇಷ್ಟವಾಗಿದ್ದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡುವ ಮೂಲಕ ತಿಳಿಸಿ. ದಯವಿಟ್ಟು ಇದನ್ನು ನಿಮ್ಮ ಸ್ನೇಹಿತರು ಹಾಗು ಕುಟುಂಬದವರಿಗೆ ಕಳಿಸಿ ಓದಲು ಪ್ರೋತ್ಸಾಹಿಸಿ. ಇನ್ನೊಂದು ಕಥೆಯೊಂದಿಗೆ ಮತ್ತೊಮ್ಮೆ ಇಲ್ಲಿ ಹಾಜರಾಗುತ್ತೇನೆ.
ಧನ್ಯವಾದಗಳು.










